ಮನೆಗೆ ನುಗ್ಗಿ ಜೀವ ಬೆದರಿಕೆ: ವಿಜಯಲಕ್ಷ್ಮಿ ವಿರುದ್ಧ ನಟ ಧನ್ವೀರ್ ತಂದೆಯಿಂದ ದೂರು
ನಟ ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಮತ್ತು ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಗೆ ನುಗ್ಗಿ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 21ರಂದು ರಾತ್ರಿ ಸುಮಾರು 8:30ರ ಸಮಯದಲ್ಲಿ ಧನ್ವೀರ್ ಮೈಸೂರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲಿ ತಿಮ್ಮೇಗೌಡ, ಅವರ ಪತ್ನಿ ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಇದ್ದರು. ಮನೆಗೆ ಬಂದ ವಿಜಯಲಕ್ಷ್ಮಿ ಮತ್ತು ಮ್ಯಾನೇಜರ್ ನಾಗರಾಜ್, ಮನೆಯಲ್ಲಿದ್ದ ಸಂಬಂಧಿ ಅಜಯ್ ಗೌಡ ಅವರನ್ನು ಕಂಡು ರೌಡಿ ಎಂದು ತಪ್ಪಾಗಿ ಭಾವಿಸಿ, ರಂಪ ರಾದ್ದಾಂತ ಮಾಡಿದ್ದಾರೆ. ಬಳಿಕ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿ ಬೋಜಣ್ಣ ಮತ್ತು ಬಾಟಲಿ ಪ್ರಮೋದ್‌ನನ್ನು ಕಳಿಸಿದ್ದು, ಅವರು ಧನ್ವೀರ್ ಅವರ ಮನೆಗೆ ಬಂದಿದ್ದಾರೆ. ಮನೆಯಲ್ಲಿದ್ದ ವ್ಯಕ್ತಿಗಳನ್ನು “ನೀವು ಯಾರು, ನಮ್ಮ ಮನೆಗೆ ಹೇಗೆ ಬಂದ್ರಿ?” ಎಂದು ಕೇಳಿದ್ದಕ್ಕೆ, ಬಾಟಲಿ ಪ್ರಮೋದ್ ನಾನು ವಿಜಯಲಕ್ಷ್ಮಿ ತಮ್ಮ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, “ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೋ ನಮಗೆ ಗೊತ್ತಿದೆ ಎಂದು ಜೋರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ವೇಳೆ “ನಾನು ಪೊಲೀಸರಿಗೆ ಕರೆ ಮಾಡುತ್ತೇನೆ” ಎಂದು ಹೇಳಿದ ತಕ್ಷಣವೇ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ ಎಂದು ತಿಮ್ಮೇಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
