ಜಾಲಹಳ್ಳಿ: ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಗೌರವಿಸಲು ಕರೆ
ಜಾಲಹಳ್ಳಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ದಸಂಸ ಮುಖಂಡರು, ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಲಿತ ಸಂಘಟನೆ ಮುಖಂಡ ಸಾಬಣ್ಣ ಕಮಲದಿನ್ನಿ ಮಾತನಾಡಿ, ‘ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಹಾಗೂ ಶಿಕ್ಷಣದ ಅವಕಾಶ ಕಲ್ಪಿಸಿದೆ. ಶೋಷಿತರು, ಹಿಂದುಳಿದವರು ಹಾಗೂ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ಅನುಭವಿಸಿದ ನೋವು, ಸಂಕಷ್ಟ ಹಾಗೂ ಅಂದಿನ ಸಾಮಾಜಿಕ ಪರಿಸ್ಥಿತಿ ಅರಿತುಕೊಂಡು ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಅಡಿ ನಾವು ಪಡೆಯುತ್ತಿರುವ ರಕ್ಷಣೆಗೆ ಸಂವಿಧಾನಕ್ಕೆ ಗೌರವಿಸಬೇಕು ಎಂದು ಹೇಳಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮೂಲಕ ಸಂವಿಧಾನ ದಿನಕ್ಕೆ ಚಾಲನೆ ನೀಡಿದರು. ದಲಿತ ಸಂಘಟನೆಗಳ ಮುಖಂಡರಾದ ರಮೇಶ ಬಾಗೂರು, ಮೌನೇಶ ಗಾಣಧಾಳ, ಬಾಳಪ್ಪ ಬಾವಿಮನಿ, ಮುದ್ದರಂಗಪ್ಪ ತೊಗರಿ, ಮೌನೇಶ ಚಪ್ಪಳಿಕಿ, ಚಂದಪ್ಪ ಬುದ್ದಿನ್ನಿ, ಬಸವರಾಜ ಪಾಣಿ, ರಂಗಪ್ಪ ಬಂಡಿ, ಖುರ್ಷೀದ್ ಪಟೇಲ್ ಸೇರಿದಂತೆ ಅನೇಕರು ಹಾಜರಿದ್ದರು.


