Demand for resignation of Congress MP Angomcha Bimol Akoyizam
ಕಾಂಗ್ರೆಸ್ ಸಂಸದ ಪ್ರೊ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಪಡೆಯಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಆಗ್ರಹಿಸಿದರು. ಸೋಮವಾರ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅಕೋಯಿಜಮ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಆರೋಪ ಸಾಬೀತಾದ ಕಾರಣ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಅವರನ್ನು ಸೇವೆಯಿಂದ ವಜಾ ಮಾಡಿದೆ. ಸಂಸದರ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ. ಆರೋಪ ಸಾಬೀತಾದರೂ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದು ಕಾಂಗ್ರೆಸ್‌ನ ದ್ವಿಮುಖ ನೀತಿ. ಇಂಥವರಿಗೆ ಬೆಂಬಲ ನೀಡಿದ್ದಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಬೇಕು. ಆರೋಪಿತ ಸಂಸದರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.


