ಮಹದೇವಪುರದಲ್ಲಿ ನೀರು ಪೂರೈಕೆ ಸ್ಥಗಿತ; ನಾಲ್ಕು ದಿನಗಳಿಂದ ನೀರಿಲ್ಲ ಎಂದು ನಿವಾಸಿಗಳು ವರದಿ
ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗರುಡಾಚಾರ್ ಪಾಳ್ಯ ಪ್ರದೇಶದ ಮಹದೇವಪುರ–ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಜಲಮಂಡಳಿ ಮುಖ್ಯ ಪೈಪ್‌ಲೈನ್ ಅನ್ನು ಬಂದ್ ಮಾಡಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ನಾಲ್ಕು ದಿನಗಳಿಂದ ನೀರು ಪೂರೈಕೆ ಆಗಿಲ್ಲ. ಹೊಸ ಪೈಪ್‌ಲೈನ್‌ಗಳನ್ನು ಹಾಕಲು ಮುಖ್ಯ ಪೈಪ್‌ಲೈನ್ ಅನ್ನು ಜಲಮಂಡಳಿಯ ಗಮನಕ್ಕೆ ತರದೆ ಬಂದ್ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗರುಡಾಚಾರ್ ಪಾಳ್ಯ, ಲಕ್ಷ್ಮಿ ಸಾಗರ, ಆರ್‌ಎಸ್‌ಬಿ ಕಾಲೊನಿ, ಕಾವೇರಿ ನಗರ, ಸಿಂಗಯ್ಯನ ಪಾಳ್ಯ, ಮಹೇಶ್ವರಿ ನಗರ, ಶಕ್ತಿ ಲೇಔಟ್, ಕನಕ ಲೇಔಟ್, ಮತ್ತು ಪಾಪಿರೆಡ್ಡಿ ಲೇಔಟ್ ಪ್ರದೇಶಗಳಿಗೆ ನೀರು ಪೂರೈಕೆಯಾಗಿಲ್ಲ ಎಂದು ನಿವಾಸಿ ರವಿ ಆರೋಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಅವರು, ಯಾವುದೇ ಅಕ್ರಮ ಚಟುವಟಿಕೆ ನಡೆದಿಲ್ಲ ಮತ್ತು ಹೊಸ ಪೈಪ್‌ಲೈನ್ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದ್ದಾರೆ. ಬುಧವಾರದಂದು ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಶುರುವಾಗಲಿದೆ ಎಂದೂ ಅವರು ಹೇಳಿದರು.

