ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ರೂತ್ ಮನೋರಮಾ
‘ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಅದನ್ನು ತಡೆಯುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಬಗ್ಗೆ ಜಾಗೃತಿ ಅಗತ್ಯ’ ಎಂದು ‘ವುಮೆನ್ಸ್ ವಾಯ್ಸ್’ ಸಂಘಟನೆಯ ಅಧ್ಯಕ್ಷೆ ರೂತ್ ಮನೋರಮಾ ಹೇಳಿದರು. ಜಯನಗರದ ಸಿದ್ದಾಪುರದಲ್ಲಿ ಸಂಘಟನೆಯು ಬುಧವಾರ ಆಯೋಜಿಸಿದ್ದ ‘ಮಹಿಳೆಯರ ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ಕೊನೆಗೊಳಿಸಲು ಅಭಿಯಾನ’ಕ್ಕೆ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಚಾಲನೆ ನೀಡಿ ಮಾತನಾಡಿದರು. ‘ಸಮಾಜದಲ್ಲಿ ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಮಹಿಳೆಯರಿಗೆ ಮನೆ ಹಾಗೂ ಉದ್ಯೋಗ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ. ಕುಟುಂಬ ಹಾಗೂ ಸಮಾಜದಿಂದ ಆಗುತ್ತಿರುವ ಹಿಂಸೆಯನ್ನು ಸಹಿಸಿಕೊಂಡು ಹೋಗದೇ ಮಹಿಳೆಯರು ದನಿ ಎತ್ತಬೇಕು. ಅವರಿಗೆ ಅಗತ್ಯ ಕಾನೂನು ನೆರವು ಸಿಗಲಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದರು. ಸಬ್‌ಇನ್‌ಸ್ಪೆಕ್ಟರ್ ಆರ್.ಪಿ.ಕೃಷ್ಣ ಮಾತನಾಡಿ, ‘ಸಮಾಜದಲ್ಲಿ ಲಿಂಗ ತಾರತಮ್ಯ ಇರಬಾರದು. ಕೆಲಸದ ಸ್ಥಳದಲ್ಲಿ ಕಿರುಕುಳ ನಡೆಯುತ್ತಿದ್ದರೆ ಕೂಡಲೇ ಪೊಲೀಸರಿಗೆ ದೂರು ನೀಡಬೇಕು’ ಎಂದರು. ವಕೀಲೆ ಪ್ರೊ.ವಲರ್ಮತಿ, ಶಿವಸಿದ್ದಯ್ಯ, ಸಂಸ್ಥೆಯ ಪದಾಧಿಕಾರಿಗಳಾದ ಮಂಜುಳಮ್ಮ, ಅಹಲ್ಯಾ, ಸತ್ಯಾ ಪಾಲ್ಗೊಂಡಿದ್ದರು.


