ಕೇಎ ನೇಮಕಾತಿ ಪರೀಕ್ಷೆ: ಕೊಠಡಿಗೆ ಇಬ್ಬರು ಮೇಲ್ವಿಚಾರಕರು
ಕಲ್ಯಾಣ ಕರ್ನಾಟಕ ವೃಂದದ ಪೌರಾಡಳಿತ ಇಲಾಖೆಯಲ್ಲಿನ ಎಲೆಕ್ಟ್ರೀಷಿಯನ್ ಗ್ರೇಡ್-1 ಮತ್ತು ಗ್ರೇಡ್–2, ಫಾರ್ಮಸಿ ಮತ್ತು ನರ್ಸಿಂಗ್ ಮತ್ತಿತರ ಹುದ್ದೆಗಳಿಗೆ ನ.6ರಿಂದ ಮೂರು ದಿನ ಲಿಖಿತ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಕೈಗೆತ್ತಿಕೊಂಡಿದೆ. ಅಕ್ರಮ ತಡೆಯಲು ಹಲವು ಕಠಿಣ ಕ್ರಮಗಳ ಜತೆಗೆ ಕೊಠಡಿಗೆ ಇಬ್ಬರು ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜಿಸುವ ತೀರ್ಮಾನವನ್ನು ಇದೇ ಮೊದಲ ಬಾರಿ ತೆಗೆದುಕೊಳ್ಳಲಾಗಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು, ಒಬ್ಬರು ಮೇಲ್ವಿಚಾರಕರು ಕೊಠಡಿಯಲ್ಲೇ ಮುಂಭಾಗದಲ್ಲಿ ಇದ್ದರೆ, ಮತ್ತೊಬ್ಬರು ಹಿಂಭಾಗದಲ್ಲಿ ನಿಂತು ನಿಗಾ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ನ.6ರಂದು ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಎಂಟು ಎಲೆಕ್ಟ್ರೀಷಿಯನ್ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಯಲಿದ್ದು, 1,015 ಮಂದಿ ಅರ್ಜಿ ಸಲ್ಲಿಸಿದ್ದಾರೆ. 7ರಂದು ಫಾರ್ಮಸಿ ಹಾಗೂ 14ರಂದು ನೀರು ಸರಬರಾಜು ನಿರ್ವಾಹಕರು, ಸಹಾಯಕ ನೀರು ಸರಬರಾಜು ನಿರ್ವಾಹಕರ 205 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.


