ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ನೋಟಿಸ್ ವಿಲೇವಾರಿ ಪೂರ್ಣ
ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ 43.82 ಲಕ್ಷ ಮತದಾರರಿಗೆ ನೀಡಿದ್ದ ಎಲ್ಲ ನೋಟಿಸ್‌ಗಳನ್ನು ವಿತರಣೆ ಮಾಡಿ ವಿಚಾರಣೆ ನಡೆಸಿ, ವಿಲೇವಾರಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ನೋಟಿಸ್ ವಿಲೇವಾರಿ ಮಾಡಲಾದ ಮತದಾರರ ಪೈಕಿ ಅರ್ಹರು ಇದೇ 27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದವರಲ್ಲಿ ಬಹುತೇಕರನ್ನು ಅಂತಿಮ ಪಟ್ಟಿಗೆ ಸೇರಿಸಲಾಗುತ್ತದೆ. ಒಟ್ಟಾರೆಯಾಗಿ 2.28 ಲಕ್ಷ ಮತದಾರರನ್ನು ತೆಗೆದುಹಾಕುವಂತೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಅಗತ್ಯ ದಾಖಲೆಗಳು ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮತದಾರರು ಮತ್ತು ಇತರರು, ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ 1.85 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ. ನೋಟಿಸ್ ಮತ್ತು ಆಕ್ಷೇಪಣೆಗಳಿಗೆ ಉತ್ತರಿಸಿದ ಸುಮಾರು 95,000ದಷ್ಟು ಮತದಾರರ ವಿರುದ್ಧ ಮತದಾರರ ನೋಂದಣಾಧಿಕಾರಿಗಳೇ ಅರ್ಜಿ ನಮೂನೆ–7 ಸೃಜಿಸಿದ್ದಾರೆ. ಆ ಎಲ್ಲ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ ಎಂದು ಮಾಹಿತಿ ನೀಡಿವೆ.


