ಬೆಂಗಳೂರು ಅಭಿವೃದ್ಧಿಗೆ ₹11,198 ಕೋಟಿ ಮೀರದಂತೆ ಸಂಪುಟ ತೀರ್ಮಾನ, ₹2,321 ಕೋಟಿಯಲ್ಲಿ ವೈಟ್‌ಟಾಪಿಂಗ್ ಗೆ ಸಮ್ಮತಿ
ರಾಜ್ಯದ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ 11,198 ಕೋಟಿ ರು.ಗೆ ಮೀರದಂತೆ ವೆಚ್ಚ ಮಾಡಲು ಯೋಜನೆಗಳನ್ನು ಸಿದ್ಧಪಡಿಸಿ ಕಳುಹಿಸಲು ಸೂಚಿಸಿದ್ದು, ಇದರಂತೆ ಯೋಜನೆಗಳನ್ನು ಸಿದ್ಧಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ನೆರವಿನ 2,300 ಕೋಟಿ ರು. ಸೇರಿದಂತೆ ಒಟ್ಟು 11,198 ಕೋಟಿ ರು. ಬಳಕೆಗೆ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಇದೇ ವೇಳೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ 71ನೇ ವಾರ್ಡ್ ನಲ್ಲಿರುವ ಬಾಲಗಂಗಾಧರ ನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಆರಂಭಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 2,321.17 ಕೋಟಿ ರು. ಅಂದಾಜು ವೆಚ್ಚದಲ್ಲಿ 12 ಪ್ಯಾಕೇಜ್ ಗಳಲ್ಲಿ 130.85 ಕಿ.ಮೀ. ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ ಬಿ-ಸ್ಮೈಲ್ ವತಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್ .ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯನ್ನು ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಲು 486.79 ಕೋಟಿ ರು. ವೆಚ್ಚದ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.50 ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.50 ರಷ್ಟನ್ನು ಬೆಂಗಳೂರು ನಗರ ಪಾಲಿಕೆಗಳು ಭರಿಸಬೇಕು ಎಂದು ತಿಳಿಸಲಾಗಿದೆ.


