BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ದಿನಗಳ ಹಿಂದೆ

ಬೆಂಗಳೂರಿನ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರಿನ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ
ಚಿತ್ರ: Prajavani

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ನಗರದ 23ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ (ಇ.ಡಿ) ದೋಷಾರೋಪ ಪಟ್ಟಿ ಸಲ್ಲಿಸಿದ್ದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು. ಪ್ರಮುಖ ಆರೋಪಿಗಳಾದ ಹಿಂದಿನ ಪರೀಕ್ಷಾ ನಿಯಂತ್ರಕ, ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜು ಕನ್ನಾಳೆ ವಿರುದ್ಧ 4,087 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿ ಇಬ್ಬರ ನಡುವೆ ನಡೆದ ಹಣಕಾಸು ವ್ಯವಹಾರ ಮತ್ತು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಜಮೆ ಮಾಡಿರುವ ಹಣ, ಆ ಹಣದಿಂದ ಘ್ಯಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ಕೊಡಿಸಿದ್ದ ಚಿನ್ನಾಭರಣ, ಉತ್ತರ ಪ್ರದೇಶದಲ್ಲಿರುವ ಆಸ್ತಿ ಖರೀದಿ ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ. ಕೆಪಿಎಸ್‌ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದಡಿ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಆಧಾರದಲ್ಲಿ ಮೊದಲು ಸಿಐಡಿ ತನಿಖೆ ನಡೆಸಿತ್ತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengaluruKPSCscam