BLR Today
ಬುಧವಾರ, ಅಕ್ಟೋಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ಡಿಜೆ ಬಳಕೆಯ ಕುರಿತು ಪ್ರತಿಭಟನೆ

ಬೆಂಗಳೂರಿನ ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ಡಿಜೆ ಬಳಕೆಯ ಕುರಿತು ಪ್ರತಿಭಟನೆ
ಚಿತ್ರ: Prajavani

ಮಂಗಳವಾರ ನಗರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಧಾನ ಪರಿಷತ್‌ನ ಆಗ್ನೇಯ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಕೆಂಪೇಗೌಡರ ಪಲ್ಲಕ್ಕಿಯ ಮೆರವಣಿಗೆಯ ಉದ್ದಕ್ಕೂ ಡಿ.ಜೆ ಬಳಕೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಒಕ್ಕಲಿಗ ಸಮುದಾಯದ ಯುವಕರು ಮತ್ತು ಕೆಲವು ಮುಖಂಡರು ಡಿ.ಜೆ ಬಳಕೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು. ಅಲ್ಲದೆ, ಕಾರ್ಯಕ್ರಮದ ವೇದಿಕೆಗೆ ಬಂದ ಪ್ರತಿಭಟನಕಾರರು, ಬ್ಯಾರಿಕೇಡ್‌ಗಳನ್ನು ಕೆಡವಿ ಹಾಕಿ ವೇದಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾದರು. ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಸಮೃದ್ಧಿ ಮಂಜುನಾಥ್ ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಮುಂದಾದರು. ಜೊತೆಗೆ ಈ ರೀತಿ ಗಲಾಟೆ ಮತ್ತು ಪ್ರತಿಭಟನೆ ಮುಂದುವರಿಸಿದ್ದಲ್ಲಿ, ಕಾರ್ಯಕ್ರಮದಲ್ಲೇ ಪಾಲ್ಗೊಳ್ಳದೆ, ನಿರ್ಗಮಿಸುವುದಾಗಿ ಶಾಸಕರು, ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರು. ಇದಕ್ಕೂ ಬಗ್ಗದ ಪ್ರತಿಭಟನಕಾರರು, ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ನಿರ್ಗಮಿಸುವಂತೆ ಘೋಷಣೆ ಕೂಗಿದರು. ಇದರಿಂದ ಮುಜುಗರಕ್ಕೊಳಗಾದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್. ಅನಿಲ್ ಕುಮಾರ್ ವೇದಿಕೆಯಿಂದ ಇಳಿದು, ಹೊರ ನಡೆದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruProtestKempegowda JayantiOkkalinga CommunityPolitics