ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಜಾರಿಗೆ ಆಗ್ರಹಿಸಿ ಹಾಗೂ ಶಾಲಾ ದತ್ತು ಯೋಜನೆ ವಿರೋಧಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ರೂಪಿಸಿದ ಪಕ್ಷವೇ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ಇಂದಿಗೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಪೂರ್ಣವಾಗಿ ಜಾರಿ ಮಾಡಲು ಸೋತಿರುವುದು ಖಂಡನೀಯ’ ಎಂದು ಹೇಳಿದರು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಒಪ್ಪಿಸಲು ಮುಂದಾಗಿರುವುದು ನಿಜಕ್ಕೂ ಅಪಾಯಕಾರಿ ಎಂದು ಹೇಳಿದರು. ಹೋರಾಟಗಾರ ಶ್ರೀಪಾದ್ ಭಟ್ ಮಾತನಾಡಿ, ‘ಈ ಸರ್ಕಾರಕ್ಕೆ ನಿಜವಾಗಲೂ ಮಕ್ಕಳ ಬಗ್ಗೆ ಕಾಳಜಿಯಿದ್ದರೆ ತಕ್ಷಣ ದತ್ತು ಯೋಜನೆಯನ್ನು ಕೈಬಿಟ್ಟು ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಲು ಕಾರ್ಯಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು. ಹೋರಾಟಗಾರ ಎಸ್.ಆರ್ ಹಿರೇಮಠ ಮಾತನಾಡಿ, ‘ರಾಜ್ಯದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳು ಗಟ್ಟಿಯಾಗಬೇಕು’ ಎಂದು ಹೇಳಿದರು.


