ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: ಯುವಕನ ಬಂಧನ
ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: ಯುವಕನ ಬಂಧನ
ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಮಾದನಾಯಕನಹಳ್ಳಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮಾಗಡಿ ರಸ್ತೆ ಸಮೀಪದ ನಿವಾಸಿ ಎಸ್. ನಂದೀಶ್ ಬಂಧಿತ ಆರೋಪಿ. ಅರಸೀಕೆರೆಯ 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಂದೀಶ್ ಇನ್‌ಸ್ಟಾಗ್ರಾಂ ಮೂಲಕ ಯುವತಿಗೆ ಪರಿಚಯವಾಗಿದ್ದ. ಬಳಿಕ ಆಕೆಯ ಮನೆಗೆ ತೆರಳಿ ಪೋಷಕರನ್ನು ಪರಿಚಯಿಸಿಕೊಂಡಿದ್ದ. ತಾನು ಉತ್ತಮ ಉದ್ಯೋಗದಲ್ಲಿದ್ದು, ಯುವತಿಗೂ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 28ರಂದು ನಂದೀಶ್‌ಗೆ ರಾಖಿ ಕಟ್ಟಲು ಯುವತಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಕಡಬಗೆರೆಯ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಿದ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಖಾಸಗಿ ಕ್ಷಣಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ, ಪದೇ ಪದೇ ಬೆಂಗಳೂರಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ನಡುವೆ ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿ ಮದುವೆಯಾಗುವಂತೆ ಯುವತಿ ಮನವಿ ಮಾಡಿದ್ದಾರೆ. ಆದರೆ, ಆರೋಪಿ ಆಕೆಯನ್ನು ನಿಂದಿಸಿ, ವೇಶ್ಯಾವಾಟಿಕೆ ದಂಧೆಗೆ ತಳ್ಳುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ಭಯದ ಕಾರಣಕ್ಕೆ ದೂರು ನೀಡಿರಲಿಲ್ಲ. ಸ್ನೇಹಿತರೊಂದಿಗೆ ಚರ್ಚಿಸಿದಾಗ, ಅವರು ಧೈರ್ಯ ಹೇಳಿದ್ದರಿಂದ ತಡವಾಗಿ ದೂರು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.


