ಬೆಂಗಳೂರಿನಲ್ಲಿ ಕಚೇರಿಗೆ ನುಗ್ಗಿ ಯುವತಿಗೆ ಚಾಕು ತೋರಿಸಿ ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ ಬಂಧನ
ಬೆಂಗಳೂರಿನಲ್ಲಿ ಕಚೇರಿಗೆ ನುಗ್ಗಿ ಯುವತಿಗೆ ಚಾಕು ತೋರಿಸಿ ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ ಬಂಧನ
ನವೆಂಬರ್ 3 ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿ ಕಚೇರಿಗೆ ನುಗ್ಗಿ ಯುವತಿಯೊಬ್ಬರಿಗೆ ಚಾಕು ತೋರಿಸಿ ಚಿನ್ನದ ಸರ ನೀಡುವಂತೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಅಕ್ಟೋಬರ್ 31ರಂದು ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಸರಗಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಭುರಾಜ್ ಎಂಬಾತ ಕಚೇರಿಗೆ ನುಗ್ಗಿ ಯುವತಿಯ ಚಿನ್ನದ ಸರವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಸರ ನೀಡದಿದ್ದರೆ ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಆರೋಪಿಯನ್ನು ಹಿಡಿಯಲು ಮುಂದಾದಾಗ ಯುವತಿಯನ್ನು ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ಪಡೆದ ಇಂದಿರಾನಗರ ಠಾಣೆ ಪೊಲೀಸರು ಪ್ರಭುರಾಜ್‌ನನ್ನು ಬಂಧಿಸಿದ್ದಾರೆ. ಯುವತಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಗಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಬಂಧನ ಘಟನೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಆಮಟೆ ಸ್ಪಷ್ಟನೆ ನೀಡಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಯತ್ನದ ಪ್ರಕರಣ ದಾಖಲಾಗಿದೆ. ಆರೋಪಿ ಸರ ಕದಿಯುವ ಉದ್ದೇಶದಿಂದ ಕಚೇರಿಗೆ ಬಂದಿದ್ದ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದಾಗ ಯುವತಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.


