ಅಮೆಜಾನ್‌ನಲ್ಲಿ ತರಿಸಿದ ಪ್ರೋಟೀನ್ ಬಾರ್ ಚಾಕೋಲೇಟ್‌ನಲ್ಲಿ ಜೀವಂತ ಹುಳು; ಈಗಾಗಲೆ 6 ತಿಂದಿದ್ದ ಟೆಕ್ಕಿ!
ಬೆಂಗಳೂರಿನ ಗರದ ನಿವಾಸಿಯೊಬ್ಬರು ಇ-ಕಾಮರ್ಸ್ ವೆಬ್ ಸೈಟ್ ಮೂಲಕ ಖರೀದಿಸಿದ್ದ ಪ್ರೋಟೀನ್ ಬಾರ್ ನಲ್ಲಿ ಜೀವಂತ ಹುಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಕೊಮ್ಮಘಟ್ಟ ನಿವಾಸಿ ಶಿವನಾಗ್ ಅವರು, ಅಮೆಜಾನ್ ಮೂಲಕ ಆರ್ಡರ್ ಮಾಡಿ ಅ.7ರಂದು ತರಿಸಿಕೊಂಡಿದ್ದ ರೈಟ್ ಬೈಟ್ ಹೆಸರಿನ ಪ್ರೊಟೀನ್ ಬಾರ್ ನಲ್ಲಿ ಬಿಳಿ ಬಣ್ಣದ ಹುಳು ಕಾಣಿಸಿಕೊಂಡಿದೆ. ಈ ಕುರಿತು ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿರುವ ಶಿವನಾಗ್, ಆರೋಗ್ಯ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಒಟ್ಟು 12 ಪ್ರೊಟೀನ್ ಬಾರ್ ಗಳನ್ನು ಖರೀದಿಸಿದ್ದೆ. ಅದರಲ್ಲಿ ಆರು ಸೇವಿಸಿದ್ದೇನೆ. ಗುರುವಾರ ಮತ್ತೊಂದು ಬಾರ್ ತಿನ್ನಲೆಂದು ಕವರ್ ತೆರೆದ ಕೂಡಲೇ ಬಿಳಿ ಹುಳು ಕಾಣಿಸಿಕೊಂಡಿತು. ಈ ಕುರಿತು ಪ್ರೋಟೀನ್ ಬಾರ್ ಕಂಪನಿಗೆ ದೂರು ನೀಡಿದ್ದೇನೆ. ಅಲ್ಲದೇ, ನನ್ನಂತೆಯೇ ಬೇರೆಯವರು ಕೂಡ ಹುಳು ಬಂದಿರುವ ಕುರಿತು ಪೋಸ್ಟ್ ಮಾಡಿದ್ದಾರೆ. ಹುಳು ಬಂದಿರುವ ಪ್ರೋಟೀನ್ ಬಾರ್ ಆಗಸ್ಟ್ ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗಿದ್ದು, 2027ರ ಆಗಸ್ಟ್ ವರೆಗೂ ಅವಧಿ ಇದೆ ಶಿವನಾಗ್ ತಿಳಿಸಿದರು.

