ಕೆಎಸ್‌ಎಲ್‌ಯು ಎಲ್‌ಎಲ್.ಬಿ ಕೋರ್ಸ್‌ಗೆ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳ ಮೀಸಲಾತಿ ಅಧಿಸೂಚನೆ ಹೊರಡಿಸಿದೆ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಮೂರು ವರ್ಷದ ಎಲ್‌ಎಲ್.ಬಿ ಕೋರ್ಸ್ ಪ್ರವೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ' (ಎನ್‌ಎಲ್‌ಎಸ್‌ಐಯು) ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಕೆಎಸ್‌ಎಲ್‌ಯು ಪರ ವಕೀಲರು, ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊರಡಿಸಿದ್ದ ವಿಶೇಷ ಆದೇಶದ ಆಧಾರದಲ್ಲಿ ಕೆಎಸ್‌ಎಲ್‌ಯು ಇದೇ 16ರಂದು ಪ್ರವೇಶ ಮೀಸಲು ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದ್ದಾರೆ. ಅಂತೆಯೇ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳ ಕನಿಷ್ಠ ಅರ್ಹತಾ ಅಂಕವನ್ನು ಶೇ 40ಕ್ಕೆ ಇಳಿಸಲಾಗಿದೆ ಎಂದೂ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಈ ಕುರಿತು ವಿಚಾರಣೆಯನ್ನು ಇದೇ 29ಕ್ಕೆ ನಿಗದಿಪಡಿಸಲಾಗಿದೆ. ಸರ್ಕಾರದ ಆದೇಶದಲ್ಲಿ ಈ ಮೀಸಲಾತಿಯ ಅನುಷ್ಠಾನವು ನ್ಯಾಯಾಲಯದ ಮುಂದಿನ ಆದೇಶ ಹಾಗೂ ಸರ್ಕಾರ ರೂಪಿಸಲಿರುವ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

