ಕೆಪಿಎಸ್‌ಸಿ ವಂಚನೆ: ಪರೀಕ್ಷಾ ಅಕ್ರಮದಲ್ಲಿ ವ್ಯವಸ್ಥಿತ ಜಾಲ
ಪಶು ವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರ್ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ, ಪರೀಕ್ಷಾ ನಿಯಂತ್ರಕರಾಗಿದ್ದ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ಅವರು ಒಂದು ಜಾಲದಂತೆ ಕೆಲಸ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ. ನಾಲ್ವರು ಈಗ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿ ಇದ್ದಾರೆ. ಶಿವಶಂಕರಪ್ಪ ಮತ್ತು ಗೀತಾ ಅವರು ಅಭ್ಯರ್ಥಿಗಳನ್ನು ಸಂಪರ್ಕಿಸಿ 80 ಪ್ರಶ್ನೆಗಳ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ಒದಗಿಸುವ ಆಮಿಷ ಒಡ್ಡಿದ್ದರು. ಇದಕ್ಕಾಗಿ ಕೆಲವು ಅಭ್ಯರ್ಥಿಗಳಿಗೆ ₹50 ಲಕ್ಷದವರೆಗೆ ಬೇಡಿಕೆ ಇಟ್ಟಿದ್ದರು. ₹40 ಲಕ್ಷಕ್ಕೆ ಒಪ್ಪಿಕೊಂಡಿದ್ದರು ಎಂದು ಇ.ಡಿ ಮಾಹಿತಿ ನೀಡಿದೆ. ಗಂಗ್ವಾರ್ ಮತ್ತು ಕನ್ನಾಳೆ ಅವರು ಅಭ್ಯರ್ಥಿಗಳನ್ನು ಸಂಪರ್ಕಿಸಿ ಪ್ರಶ್ನೆಪತ್ರಿಕೆಗಳನ್ನು ಒದಗಿಸುವ ಆಮಿಷ ಒಡ್ಡಿದ್ದರು. ಅದಕ್ಕಾಗಿ ಪ್ರತಿ ಅಭ್ಯರ್ಥಿಗಳಿಂದ ₹80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗೆ 10 ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದಲ್ಲಿರುವ ಏರ್‌ಬಿಎನ್‌ಬಿ ವಿಲ್ಲಾ ರೆಸಾರ್ಟ್‌ನಲ್ಲಿ ಸೇರಿಸಿ, ಪ್ರಶ್ನೆಪತ್ರಿಕೆ ಮತ್ತು ಅವುಗಳ ಕೀ ಉತ್ತರಗಳನ್ನು ಒದಗಿಸಿದ್ದರು. ಇದಕ್ಕಾಗಿ ಕನ್ನಾಳೆ ಪ್ರತಿ ಅಭ್ಯರ್ಥಿಯಿಂದ ₹40 ಲಕ್ಷದಿಂದ ₹50 ಲಕ್ಷ ಪಡೆದುಕೊಂಡಿದ್ದರು ಎಂದು ವಿವರಿಸಿದೆ.


