ಕೆಪಿಎಸ್ಸಿ ಹಗರಣ: ಎರಡು ಟೀಂಗಳಿಂದ ನಡೆಯುತ್ತಿತ್ತು ಡೀಲ್! ಜ್ಞಾನೇಂದ್ರ ವಿಚಾರಣೆ ವೇಳೆ ಹಲವು ಪ್ರಮುಖ ವಿಚಾರ ಬಯಲು
ತನಿಖೆ ವೇಳೆ ಕರ್ನಾಟಕ ಲೋಕ ಸೇವಾ ಆಯೋಗದ (KPSC) ಮತ್ತಷ್ಟು ಕರ್ಮಕಾಂಡಗಳು ಬಯಲಾಗಿವೆ. ಕೆಪಿಎಸ್ಸಿಯ 2 ತಂಡಗಳು ಸರ್ಕಾರಿ ಹುದ್ದೆ ನೇಮಕಾತಿ ವೇಳೆ ಮಧ್ಯವರ್ತಿಗಳ ಮೂಲಕ ಡೀಲ್ ನಡೆಸುತ್ತಿದ್ದವು. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಮತ್ತು ಬಸವರಾಜ್ ಕನ್ನಾಳೆಯಂತಹ ಮಧ್ಯವರ್ತಿಗಳದ್ದೇ ಒಂದು ಟೀಂ ಆಗಿದ್ದರೆ, KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯರದ್ದು ಮತ್ತೊಂದು ತಂಡವಿತ್ತು. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನ ಸಂಪರ್ಕಿಸುತ್ತಿದ್ದ ಇವರು, ಹಣ ಪಡೆದು ಡೀಲ್ ಮುಗಿಸುತ್ತಿದ್ದರು ಎಂಬುದು ಸಿಐಡಿ ಮತ್ತು ಇಡಿ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಒಂದೆರಡಲ್ಲ ಬರೋಬ್ಬರಿ 13 ನೇಮಕಾತಿಗಳಲ್ಲಿ ಅಕ್ರಮ? ಐಎಎಸ್ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ವೇಳೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ 3-4 ವರ್ಷಗಳಲ್ಲಿ ಕೆಪಿಎಸ್ಸಿ ಮುಖಾಂತರ ನಡೆದಿರುವ ಬರೋಬ್ಬರಿ 13 ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ. ಪಶುವೈದ್ಯಧಿಕಾರಿಗಳ ನೇಮಕಾತಿ, KAS ಅಧಿಕಾರಿಗಳ ನೇಮಕಾತಿ, ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್‌ಗಳು, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್‌ಗಳು ಸೇರಿರಿದಂತೆ ಹಲವು ಇಲಾಖೆ ನೇಮಕಾತಿಗಳ ವೇಳೆ ಸರ್ಕಾರಿ ಹುದ್ದೆಯ ಮಾರಾಟ ನಡೆದಿರುವ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿವೆಯಂತೆ.


