ಕೆಪಿಎಸ್ಸಿ ನೇಮಕಾತಿ ಹಗರಣ: ಇಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ
ಕೆಪಿಎಸ್ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಡೆಯಿಂದ ಅಂದಿನ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ, ಪರೀಕ್ಷೆ ಮುಂಚಿತವಾಗಿಯೇ 80 ಪ್ರಶ್ನೆಗಳ ಉತ್ತರಗಳನ್ನು ಪಡೆದುಕೊಂಡು ನೇರವಾಗಿ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ. ಈ ಸಂಬಂಧ ಇಡಿ ಮಾಧ್ಯಮ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ. ಶಿವಶಂಕರಪ್ಪ ಸಾಹುಕರ್ ಮತ್ತು ಗೀತಾ ಬಂಧನದ ಬಳಿಕ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪ್ರಶ್ನೆಪತ್ರಿಕೆ, ಕೀ ಉತ್ತರನ್ನು ಸೋರಿಕೆ, 1:3 ಮೆರಿಟ್ ನಲ್ಲಿ ಸೋರಿಕೆ ಮಾಡಿ ಹಣ ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆ ಒಂದು ದಿನ ಮುಂಚಿತವಾಗಿ ಕೀ ಉತ್ತರ ನೀಡಲಾಗಿತ್ತು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 20 ಲಕ್ಷದಿಂದ 40 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ತನಿಖೆಯ ಗೊತ್ತಾಗಿದೆ. ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕಡೆಯಿಂದ ಬಿ.ವಿ ಗೀತಾ ಮೊದಲ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನ ಪಡೆದುಕೊಂಡಿದ್ದಾರೆ. ಬಳಿಕ ಗೀತಾ ಒಬ್ಬ ಅಭ್ಯರ್ಥಿಯಿಂದ ಡೀಲ್ ಮಾಡಿಕೊಂಡಿದ್ದರು. 40 ಲಕ್ಷದಲ್ಲಿ 20 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಡೆದಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಸಹ ಅಭ್ಯರ್ಥಿ ಜೊತೆ 20 ಲಕ್ಷಕ್ಕೆ ಡೀಲ್ ಮಾಡಿಕೊಂಡು ಮುಂಗಡವಾಗಿ 10 ಲಕ್ಷ ರೂ. ಪಡೆದಿದ್ದಾರೆ. ಹೀಗೆ ಒಟ್ಟು 6 ಅಭ್ಯರ್ಥಿಗಳ ಜೊತೆ ಇಬ್ಬರು ಡೀಲ್ ಮಾಡಿಕೊಂಡಿರೋದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಆಧಾರದಲ್ಲಿ ಸೆಪ್ಟೆಂಬರ್ 06 ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾರನ್ನ ಬಂಧಿಸಲಾಗಿದೆ. ಇವರಿಬ್ಬರನ್ನ PMLA ಪ್ರಕರಣಗಳ ವಿಶೇಷ ನ್ಯಾಯಾಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ED ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಲಾಗ್ತಿದೆ ಎಂದು ಇಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.


