ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಕೆಒಎ ಸನ್ಮಾನ
ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ವತಿಯಿಂದ ಶೀಘ್ರವೇ ಸನ್ಮಾನಿಸಲಾಗುವುದು ಎಂದು ಕೆಒಎ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ ತಿಳಿಸಿದ್ದಾರೆ. ನಾಲ್ಕು ಸ್ವರ್ಣ ಸೇರಿದಂತೆ 10 ಪದಕಗಳ ಗೆಲುವಿನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಕೊಡುಗೆಯಿದೆ. ಭಾರತ ಕಬಡ್ಡಿ ತಂಡಗಳ ಕೋಚ್‌ಗಳಾದ ಬಿ.ಸಿ.ರಮೇಶ್, ಮಮತಾ ಪೂಜಾರಿ, ಬಾಕ್ಸಿಂಗ್ ಕೋಚ್ ಕುಟ್ಟಪ್ಪ ಅವರನ್ನು ಅಭಿನಂದಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಣವಿ ಅರಸ್ (ಗಾಲ್ಫ್ ಮಹಿಳೆಯರ ವೈಯಕ್ತಿಕ ಚಿನ್ನ, ತಂಡದಲ್ಲಿ ಬೆಳ್ಳಿ), ಎಂ.ಆರ್.ಪೂವಮ್ಮ (ಮಹಿಳೆಯರ 4x400 ಮೀ. ರಿಲೆಯಲ್ಲಿ ಸ್ವರ್ಣ, ಮಿಶ್ರ ತಂಡದಲ್ಲಿ ಬೆಳ್ಳಿ), ಎಚ್.ಎಸ್. ಮೋಹಿತ್ (ಪುರುಷರ ಹಾಕಿ ತಂಡದಲ್ಲಿ ಚಿನ್ನ), ಶ್ರೇಯಾಂಕಾ ಪಾಟೀಲ (ಮಹಿಳೆಯರ ಕ್ರಿಕೆಟ್‌ನಲ್ಲಿ ಚಿನ್ನ), ಅದಿತಿ ಅಶೋಕ್ (ಗಾಲ್ಫ್ ಮಹಿಳೆಯರ ತಂಡದಲ್ಲಿ ಬೆಳ್ಳಿ), ಸ್ನೇಹಾ ಎಸ್.ಎಸ್. (ಮಹಿಳೆಯರ 4x100 ಮೀ. ರಿಲೆಯಲ್ಲಿ ಕಂಚು), ಆಯುಷ್ ಶೆಟ್ಟಿ (ಬ್ಯಾಡ್ಮಿಂಟನ್ ಪುರುಷರ ತಂಡದಲ್ಲಿ ಕಂಚು), ತಿಲೋತ್ತಮ ಸೇನ್ (50 ಮೀ. ರೈಫಲ್ 3 ಪಿ ಮಹಿಳಾ ತಂಡದಲ್ಲಿ ಬೆಳ್ಳಿ) ಸೇರಿದಂತೆ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.


