ಕರ್ನಾಟಕ ಕ್ರೀಡಾಪಟುಗಳು ಬೆಂಗಳೂರಿನಲ್ಲಿ ಬೇಡಿಕೆಗಳ ಅನುಷ್ಠಾನಕ್ಕಾಗಿ ಪ್ರತಿಭಟನೆ
ನೇರ ಮತ್ತು ವಿಶೇಷ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕ್ರೀಡಾಪಟುಗಳ ಹೋರಾಟ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದೆ. ಅಂಗವಿಕಲ ಕ್ರೀಡಾಪಟುಗಳಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಹಾಗೂ ಪದಕ ಪಡೆದ ಕ್ರೀಡಾಪಟುಗಳಿಗೆ ಆಯಾ ವರ್ಷದಲ್ಲೇ ಸೂಕ್ತ ನಗದು ಪುರಸ್ಕಾರ ನೀಡಿ ಗೌರವಿಸಬೇಕು. ತರಬೇತಿ ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರ ಕ್ರೀಡಾಪಟುಗಳಿಗೆ ವೇತನಸಹಿತ ರಜೆ ಕೊಡಬೇಕು. ₹20 ಲಕ್ಷ ಉಚಿತ ವಿಮೆ ಒದಗಿಸಬೇಕು. ಮಾಸಾಶನ ಹೆಚ್ಚಿಸಬೇಕು. ಅಂಗವಿಕಲ ಕ್ರೀಡಾಪಟುಗಳಿಗೆ ನುರಿತ ತರಬೇತುದಾರರನ್ನು ನೇಮಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಅಧ್ಯಕ್ಷ ಪ್ರವೀಣ್ ಪಿ. ಉಳ್ಳಾಗಡ್ಡಿ, ಕಾರ್ತಿಕ್ ಇದ್ದರು.


