ಕೆ.ಮಾಯಿಗೌಡರ ಆತ್ಮಕಥೆ ‘ಹುಚ್ಚೆಳ್ಳು ಹೂ’ ಕೃತಿ ಬಿಡುಗಡೆ ನಾಳೆ
ಶ್ರೀ ರಾಮಕೃಷ್ಣ ಸೇವಾ ಕೇಂದ್ರ(ಯಾಚೇನಹಳ್ಳಿ)ದ ವತಿಯಿಂದ ಅ.18 ರಂದು ಬೆಳಿಗ್ಗೆ 10.30 ಗಂಟೆಗೆ ವೈಚಾರಿಕ ಲೇಖಕ ಕೆ.ಮಾಯಿಗೌಡರ ಆತ್ಮಕಥೆ ‘ಹುಚ್ಚೆಳ್ಳು ಹೂ’ ಕೃತಿ ಲೋಕಾರ್ಪಣಾ ಸಮಾರಂಭವು ನಗರದ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕೇಂದ್ರದ ಸ್ವಾಮಿ ನಾದಾನಂದನಾಥ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಮೊದಲನೇ ತಲೆಮಾರಿನಲ್ಲಿ ಬರುವ ಮಾಯಿಗೌಡರು ವೈಚಾರಿಕ ಹಿನ್ನೆಲೆಯನ್ನು ಮೈಗೂಡಿಸಿಕೊಂಡಂತಹ ವ್ಯಕ್ತಿ. ವೈಚಾರಿಕ ಹಿನ್ನೆಲೆಯಲ್ಲಿ ಪ್ರತಿಬಿಂಬಿಸುವಂತಹ ಮಹನೀಯರ ಜೊತೆಯಲ್ಲಿ ಕೆಲಸ ಮಾಡಿದಂತಹ ವ್ಯಕ್ತಿ ಇವರು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಕೆ.ಮಾಯಿಗೌಡರು ಇಲ್ಲಿಯವರೆಗೆ ಸುಮಾರು 32 ಕೃತಿಗಳನ್ನು ಪ್ರಕಟಿಸಿದ್ದಾರೆ’ ಎಂದು ತಿಳಿಸಿದರು. ವಿಶ್ವಮಾನವ ಕೇಂದ್ರ ಕೊಮ್ಮೇರಹಳ್ಳಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸ್ವಾಮಿ ನಾದಾನಂದನಾಥ ಅವರು ಕೃತಿ ಬಿಡುಗಡೆ ಮಾಡುವರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಧ್ಯಕ್ಷತೆ ವಹಿಸುವರು. ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕೃತಿ ಕುರಿತು ಮಾತನಾಡುವರು. ಪ್ರಕಾಶಕ ಬೆಂಗಳೂರಿನ ಎಂ.ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡುವರು. ಕೃತಿಕಾರ ಕೆ.ಮಾಯಿಗೌಡ ಕೃತಜ್ಞತಾ ನುಡಿಯಾಡುವರು ಎಂದರು.


