ಜಿಮ್ ಟ್ರೈನರ್ ನಂದನ್ ಕೊಲೆ ಕೇಸ್: ತನಿಖೆಯಲ್ಲಿ ಲೈಂಗಿಕಕಾಮ ಮತ್ತು ಡ್ರಗ್ಸ್ ಬಳಕೆಯ ಅಂಶಗಳು ಬಯಲು
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಜಿಮ್ ಆ್ಯನಿವರ್ಸರಿ ಪಾರ್ಟಿ ನೆಪದಲ್ಲಿ ನಡೆದ ಈ ಕೃತ್ಯದಲ್ಲಿ ಸಲಿಂಗಕಾಮ, ಅತಿಯಾದ ಡ್ರಗ್ಸ್ ಸೇವನೆ ಮತ್ತು ಮಾರಣಾಂತಿಕ ಹಲ್ಲೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಾರ್ಟಿಯ ವೇಳೆ ಹಾಜರಿದ್ದವರೆಲ್ಲರೂ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಮತ್ತು ಮದ್ಯ ಸೇವಿಸಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಮೃತದೇಹದ ಮೇಲೆ ಕಚ್ಚಿದ ಗುರುತುಗಳು ಪತ್ತೆಯಾಗಿವೆ. ಪೊಲೀಸರ ಪ್ರಕಾರ, ತಡರಾತ್ರಿ ನಶೆಯಲ್ಲಿದ್ದ ವೇಳೆ ವಿಶ್ವನಾಥ್ ಎಂಬಾತ ನಂದನ್‌ಗೆ ಕಿಸ್ ಮಾಡಲು ಶುರುಮಾಡಿದ್ದಾನೆ. ಬಳಿಕ ಅಲ್ಲಿ ನೆರೆದಿದ್ದವರು ನಂದನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವನಾಥ್ ಮತ್ತು ನಂದನ್ ನಡುವೆ ತೀವ್ರ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ನಂದನ್‌ನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅಮೃತಹಳ್ಳಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದು, ಪಾರ್ಟಿಯಲ್ಲಿದ್ದ ಅನುಷ್ ಶೆಟ್ಟಿ, ವಿಶ್ವನಾಥ್ ಸೇರಿದಂತೆ ಇತರರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


