₹15 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಪೂರಕ ಆರೋಪಪಟ್ಟಿ ಸಲ್ಲಿಸಿದೆ
ಅಂಬೇಡ್ಕರ್ ಅಭಿವೃದ್ಧಿ ನಿಗಮದ ₹14.95 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಹಳೆಯ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಬೆಂಗಳೂರಿನ ಎಚ್ಎಎಲ್ 2ನೇ ಹಂತದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (ಈಗ ಎಸ್ಬಿಐ) ಶಾಖೆಯಲ್ಲಿ, ನಿಗಮದ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ತೆರೆದು ನಿಗಮದ ಹಣವನ್ನು ಆ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ತಲಾ ₹5 ಕೋಟಿಯ ಮೂರು ನಿಶ್ಚಿತ ಠೇವಣಿಗಳನ್ನು ತೆರೆಯಲಾಗಿತ್ತು ಎಂದು ಇ.ಡಿ ವಿವರಿಸಿದೆ. ಈ ಹಣವನ್ನು ನಂತರದಲ್ಲಿ ಬೇರೆ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿಕೊಂಡು, ನಗದು ಮಾಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಈ ಹಿಂದೆಯೇ 25 ವ್ಯಕ್ತಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈಗ ಅಯೂಬ್ ಸಯ್ಯದ್ ಸೇರಿ ಇನ್ನೂ ನಾಲ್ವರ ವಿರುದ್ಧ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ. ಪ್ರಚಾರ ಮತ್ತು ಕಾರ್ಯಕ್ರಮ ಆಯೋಜನೆ ಕಂಪನಿಯ ಸದಸ್ಯತ್ವದ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದ ಜಾ ಲೈಫ್ಸ್ಟೈಲ್ ಪ್ರೈವೇಟ್ ಲಿಮಿಟೆಡ್ನ ಮೂವರು ಪ್ರವರ್ತಕರ ವಿರುದ್ಧ ಇ.ಡಿ ಅಧಿಕಾರಿಗಳು ಪ್ರಾಸಿಕ್ಯೂಷನ್ ದೂರು ದಾಖಲಿಸಿದ್ದಾರೆ.

