ಹೊಸ ತಂತ್ರಾಂಶ ಅಳವಡಿಕೆ ಕಾರಣ ಅಂಚೆ ಸೇವೆಗಳಲ್ಲಿ ವ್ಯತ್ಯಯ
ಬೆಂಗಳೂರು ಪ್ರಧಾನ ಅಂಚೆ ಕಚೇರಿ (ಜಿಪಿಒ) ಅಂಚೆ ಜೀವ ವಿಮೆ (ಪಿಎಲ್‌ಐ) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿದಾರರಿಗೆ ಉತ್ತಮ ಸೇವೆ ಒದಗಿಸಲು ‘ಮೆಕ್‌ಕಾಮಿಶ್’ ತಂತ್ರಾಂಶದ ಬದಲು ‘ಇನ್ಶೂರೆನ್ಸ್ ಮ್ಯಾನೇಜ್‌ಮೆಂಟ್ ಸಲ್ಯೂಷನ್’ ತಂತ್ರಾಂಶ ಅಳವಡಿಸಿಕೊಳ್ಳುತ್ತಿದೆ. ಇದೇ 26ರಿಂದ ಹೊಸ ತಂತ್ರಾಂಶದಲ್ಲಿ ಸೇವೆಗಳು ಜಾರಿಗೊಳ್ಳಲಿವೆ. ಆದರೆ, ಅಲ್ಲಿಯವರೆಗೂ ಅಂಚೆ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. 22ರಿಂದ 25ರವರೆಗೆ ಜಿಪಿಒ ವ್ಯಾಪ್ತಿಯ ಅರೇಬಿಕ್ ಕಾಲೇಜು, ಬಾಣಸವಾಡಿ, ಸಿಎಂಎಂ ಕೋರ್ಟ್ ಕಾಂಪ್ಲೆಕ್ಸ್, ಸಿಎಂಪಿ ಶಾಲೆ, ಡಾ.ಅಂಬೇಡ್ಕರ್ ಬೀದಿ, ಶಿವರಾಮ ಕಾರಂತ ನಗರ, ಹೈಕೋರ್ಟ್, ಫ್ರೇಸರ್ ಟೌನ್, ಎಚ್‌ಕೆಪಿ ರಸ್ತೆ, ಹೊರಮಾವು, ಜಲವಾಯುವಿಹಾರ, ಕಲ್ಯಾಣನಗರ, ಕೊತ್ತನೂರು, ಲೆಜಿಸ್ಲೇಟರ್ಸ್ ಹೋಮ್, ಲಿಂಗರಾಜಪುರ, ಮಾರುತಿಸೇವಾ ನಗರ, ಮ್ಯೂಸಿಯಂ ರಸ್ತೆ, ರಾಜಭವನ, ಶಿವನ್‌ಶೆಟ್ಟಿ ಗಾರ್ಡನ್, ಸೇಂಟ್ ಥಾಮಸ್ ಟೌನ್, ವಸಂತನಗರ, ವಿಧಾನಸೌಧದಲ್ಲಿರುವ ಉಪ ಅಂಚೆ ಕಚೇರಿಗಳಲ್ಲಿ ಹೊಸ ಪಾಲಿಸಿ, ಪ್ರೀಮಿಯಂ ಸಂಗ್ರಹಣೆ, ಸಾಲ ಮರು ಪಾವತಿ, ಸೇರಿದಂತೆ ಎಲ್ಲ ಸೇವೆಗಳು ಅಲಭ್ಯವಾಗಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಮುಖ್ಯ ಅಂಚೆ ಪಾಲಕರು ಪ್ರಕಟಣೆಯಲ್ಲಿ ಕೋರಿದ್ದಾರೆ.


