ಬೆಂಗಳೂರಿನ ಪಾದಚಾರಿ ಮಾರ್ಗ ಮತ್ತು ರಸ್ತೆ ಕಾಮಗಾರಿಗಳ ಮಾನದಂಡ ಪಾಲನೆಗೆ ಅಭಿವೃದ್ಧಿ ಆಯುಕ್ತರ ಸೂಚನೆ
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ, ಬೀದಿ ದೀಪದ ಕಂಬಗಳ ಅಳವಡಿಕೆ, ಸಬ್‌ವೇಗಳ ಪರಿಶೀಲನೆ ನಡೆಸಿದ ಹೆಚ್ಚುವರಿ ಅಭಿವೃದ್ಧಿ ಆಯುಕ್ತ ಆರ್. ವೆಂಕಟಾಚಲಪತಿ ಅವರು ಮಾನದಂಡ ಗಳನ್ನು ಪಾಲಿಸಲು ಸೂಚಿಸಿದರು. ಕೆ.ಆರ್. ಸರ್ಕಲ್ ಹಾಗೂ ಕುಮಾರಕೃಪಾ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಕರ್ಬ್ ಎತ್ತರವು ಮಾನದಂಡದಂತೆ ಅಭಿವೃದ್ಧಿಪಡಿಸಿ, ರಸ್ತೆ ಮತ್ತು ಪಾದಚಾರಿ ಮಾರ್ಗದ ನಡುವೆ ಸುಗಮ ಸಂಪರ್ಕ ಕಲ್ಪಿಸುವಂತೆ ಕಾಮಗಾರಿ ನಿರ್ವಹಿಸಲು ನಿರ್ದೇಶನ ನೀಡಿದರು. ಸ್ಯಾಂಕಿ ರಸ್ತೆಯಲ್ಲಿನ ದೀರ್ಘಕಾಲದಿಂದ ಉಂಟಾಗುತ್ತಿರುವ ನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೆರೆದ ಚರಂಡಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ, ಚರಂಡಿಯ ಒಳಭಾಗದಲ್ಲಿ ಸುಮಾರು ಒಂದು ಅಡಿ ಅಗಲ ಮಾತ್ರ ಇರುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯಲು ತೊಂದರೆಯಾಗುವ ಸಾಧ್ಯತೆ ಇರುವುದನ್ನು ಗಮನಿಸಿದರು. ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಯ ಅಗಲವನ್ನು ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆ.ಆರ್. ಸರ್ಕಲ್ ಸಮೀಪದಲ್ಲಿ ರುವ ಸಬ್‌ವೇಗಳನ್ನು ಪರಿಶೀಲಿಸಿದ ವೆಂಕಟಾಚಲಪತಿ ಅವರು, ಸಾರ್ವಜನಿಕರು ಸುರಕ್ಷಿತವಾಗಿ ಹಾಗೂ ಸುಗಮವಾಗಿ ಸಂಚರಿಸಲು ಅಗತ್ಯ ಸೌಲಭ್ಯಗಳಾದ ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ತ್ಯಾಜ್ಯ ತೆರವು, ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದರು. ಮುಚ್ಚಿರುವ ಸಬ್‌ವೇಗಳನ್ನು ಪರಿಶೀಲಿಸಿ, ಅವುಗಳನ್ನು ಸಾರ್ವಜನಿಕರ ಸೌಲಭ್ಯಕ್ಕೆ ಒದಗಿಸಲು ಕಾಮಗಾರಿಗಳನ್ನು ಶೀಘ್ರಪೂರೈಸುವಂತೆ ಹೇಳಿದರು.


