ಮರಳಿ ವಹಿವಾಟು: ವಿಲೀನಗೊಂಡ ಪಂಚಾಯಿತಿ ಖಾತೆಗಳ ತನಿಖೆಗೆ ಸಮಿತಿ
ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಗಳಲ್ಲಿ ಸೇರ್ಪಡೆಯಾದ ಬಳಿಕವೂ ಪಂಚಾಯಿತಿ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆದಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಬ್ಯಾಂಕ್ ಖಾತೆಯ ಸಹಿತ ಗ್ರಾಮ ಪಂಚಾಯತಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಆದ ಬಳಿಕವೂ ಅಧಿಕೃತ ಮಾದರಿ ಸಹಿ, ಸೀಲು ಬಳಸಿ ಬ್ಯಾಂಕ್ ಖಾತೆಗಳ ವಹಿವಾಟು ನಡೆದಿರುವ ಮಾಹಿತಿ ಲಭ್ಯವಾಗಿದೆ. ಕೆಲ ಗ್ರಾಮ ಪಂಚಾಯತಿಗಳಲ್ಲಿ ಒಂದು ಅಥವಾ ಎರಡು ಗ್ರಾಮಗಳು ಮಾತ್ರ ನಗರಸಭೆ, ನಗರ ಪಾಲಿಕೆಗೆ ಹಸ್ತಾಂತರವಾಗಿದ್ದು, ಹಿಂದೆ ಕೈಗೊಂಡಿದ್ದ ಕಾಮಗಾರಿಗಳಿಗೆ ಪಂಚಾಯತಿಯೇ ಹಣ ಭರಿಸುವಂತಾಗಿದೆ ಎಂಬ ಮಾಹಿತಿಯನ್ನೂ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ. ಬಿದರ್ ನಗರ ಪಾಲಿಕೆಗೆ ಸಂಪೂರ್ಣ ಹಸ್ತಾಂತರವಾದ ತರುವಾಯ ಕೋಳಾರ, ಅಲಿಯಾಬಾದ್ ಮತ್ತು ಅಮಲಾಪೂರ ಗ್ರಾಮ ಪಂಚಾಯತಿಗಳ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸಿರುವ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಅವರು ಸೂಚಿಸಿದ್ದಾರೆ.


