ನೀಲಿ ಮಾರ್ಗ: ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ
ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಕೆ.ಆರ್.ಪುರದಿಂದ ಮಾರತ್‌ಹಳ್ಳಿವರೆಗಿನ ವಿಭಾಗದಲ್ಲಿ ನವೆಂಬರ್ ಅಂತ್ಯದ ಒಳಗೆ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. ಉದ್ದದ ನೀಲಿ ಮಾರ್ಗದ ನಿರ್ಮಾಣಕ್ಕಾಗಿ ಎರಡು ಹಂತಗಳನ್ನಾಗಿ ಮಾಡಲಾಗಿತ್ತು. ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರವರೆಗೆ 2ಎ ಹಂತ ಹಾಗೂ ಅಲ್ಲಿಂದ ವಿಮಾನ ನಿಲ್ದಾಣದವರೆಗೆ 2ಬಿ ಹಂತ ಎಂದು ಮಾಡಲಾಗಿತ್ತು. ಇದೀಗ 2ಎ ಹಂತದ ಮೊದಲ ಪ್ಯಾಕೇಜ್‌ನ ಕಾಮಗಾರಿ ಪೂರ್ಣಗೊಂಡಿದೆ. ಕೆ.ಆರ್.ಪುರ, ಮಹದೇವಪುರ, ಡಿಆರ್‌ಡಿಒ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೊ, ಮಾರತ್‌ಹಳ್ಳಿ ಸೇರಿ ಆರು ಎತ್ತರಿಸಿದ ನಿಲ್ದಾಣಗಳು ಈ ಪ್ಯಾಕೇಜ್‌ನಲ್ಲಿವೆ. ದೇವರ ಬೀಸನಹಳ್ಳಿಯಿಂದ ರೇಷ್ಮೆ ಮಂಡಳಿವರೆಗಿನ ಕಾಮಗಾರಿ ಕೂಡ ಅಂತಿಮ ಹಂತಕ್ಕೆ ಬಂದಿದೆ. ಮೊದಲ ಪ್ಯಾಕೇಜ್‌ನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾದ ಬಳಿಕ ಪ್ಯಾಕೇಜ್ ವಿಭಾಗದಲ್ಲಿಯೂ ಪ್ರಾಯೋಗಿಕ ಸಂಚಾರ ಆರಂಭಿಸಲು ಸಿದ್ಧಗೊಳ್ಳಲಿದೆ. ಈ ವಿಭಾಗದಲ್ಲಿ ದೇವರ ಬೀಸನಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಅಗರ, ಎಚ್‌ಎಸ್‌ಆರ್ ಬಡಾವಣೆ (ವೆಂಕಟಪುರ), ಕೇಂದ್ರ ರೇಷ್ಮೆ ಮಂಡಳಿ ನಿಲ್ದಾಣಗಳು ಇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


