BLR Today
ಬುಧವಾರ, ನವೆಂಬರ್ 4, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru9 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನದ ಬಳೆಗಳನ್ನು ದೋಚಿ ಆಟೋ ಚಾಲಕ ಬಂಧನ

ಬೆಂಗಳೂರಿನಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನದ ಬಳೆಗಳನ್ನು ದೋಚಿ ಆಟೋ ಚಾಲಕ ಬಂಧನ
ಚಿತ್ರ: Prajavani

ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬೆದರಿಸಿ ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದ ಚಾಲಕನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಸಮೀಪದ ಚೋಳ ನಾಯಕನಹಳ್ಳಿಯ ಅಲ್ಲಾಭಕ್ಷ್‌ (47) ಬಂಧಿತ ಆಟೋ ಚಾಲಕ. ಆರೋಪಿಯಿಂದ ಅಂದಾಜು ₹2.15 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಕೆಲಸ ಮಾಡುತ್ತಿರುವ ಮಹಿಳೆಯ ಬಳೆಗಳನ್ನು ಆರೋಪಿ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅ.15ರಂದು ಮನೆಗೆ ಹೋಗಲು ವಿಧಾನಸೌಧದ ಬಳಿ ಅಲ್ಲಾಭಕ್ಷ್‌ನ ಆಟೋಗೆ ಮಹಿಳೆ ಹತ್ತಿದ್ದರು. ನಂತರ, ಅಲ್ಲಾಭಕ್ಷ್‌ ಮಾರ್ಗಮಧ್ಯೆ ಹೆಬ್ಬಾಳದ ಭದ್ರಪ್ಪಲೇಔಟ್‌ ಮೇಲ್ಸೇತುವೆ ಸಮೀಪ ಆಟೊ ನಿಲ್ಲಿಸಿ, ಎಂಜಿನ್‌ ಕೆಟ್ಟಿರುವುದಾಗಿ ಹೇಳಿದ್ದ. ಬಳಿಕ ಮಹಿಳೆಯ ಬಾಯಿ ಮುಚ್ಚಿ ಚಾಕು ತೋರಿಸಿ, ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಇದಕ್ಕೆ ಮಹಿಳೆ ಪ್ರತಿರೋಧವೊಡ್ಡಿದಾಗ ಆರೋಪಿ, ಅವರ ಕೈಯಲ್ಲಿದ್ದ ಚಿನ್ನದ ಎರಡು ಬಳೆಗಳನ್ನು ಕಿತ್ತುಕೊಂಡು ವಾಹನ ಸಮೇತ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ, ಅಲ್ಲಾಭಕ್ಷ್‌ನ ಆಟೋದ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಲಾಯಿತು. ನಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengaluruHebbalVidhana Soudha