ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತ ನೌಕರರ ಹಾವಳಿ, ಲಂಚ ವಸೂಲಿ ಆರೋಪ: ಸಾರಿಗೆ ಇಲಾಖೆ ಕಾರ್ಯದರ್ಶಿಗೆ ದೂರು
ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಓ) ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯಲ್ಲಿ ನಿವೃತ್ತರಾದ ಕೆಲವು ನೌಕರರನ್ನು ಆರ್‌ಟಿಓ ಅಧಿಕಾರಿಗಳು ಅನಧಿಕೃತವಾಗಿ ಮರುನೇಮಕ ಮಾಡಿಕೊಂಡು, ಅವರ ಮೂಲಕ ಲಂಚ ಮತ್ತು ಹಫ್ತಾ ವಸೂಲಿ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ನಿವೃತ್ತ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಾಲಕರ ಯೂನಿಯನ್ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ದೂರು ನೀಡಿದೆ. ಯೂನಿಯನ್ ದೂರಿನಲ್ಲಿ, ನಿವೃತ್ತ ಡಿ ದರ್ಜೆ ನೌಕರರು ಮತ್ತು ಸಿಬ್ಬಂದಿಯನ್ನು ಅನಧಿಕೃತವಾಗಿ ಮತ್ತೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅವರಿಗೆ ಕಚೇರಿಗಳಲ್ಲಿ ಟೇಬಲ್, ಕ್ಯಾಬಿನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಯೂನಿಯನ್ ವತಿಯಿಂದ, ಅನಧಿಕೃತವಾಗಿ ಮರುನೇಮಕ ಮಾಡಿಕೊಂಡಿರುವ ನಿವೃತ್ತ ನೌಕರರನ್ನು ಕಚೇರಿಗಳಿಂದ ತೆರವುಗೊಳಿಸುವುದು ಮತ್ತು ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.


