ಬನಶಂಕರಿ ಪ್ರದೇಶದ ಮಹಿಳೆಯ ಪುತ್ರನ ಹತ್ಯೆ ಪ್ರಕರಣ: ಆರೋಪಿ ಸುದೀಪ್‌ನಿಂದ ಸ್ಫೋಟಕ ಹೇಳಿಕೆ
ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿವಿಂಗ್ ರಿಲೇಷನ್‌ಶಿಪ್ ವಿಚಾರವಾಗಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸುದೀಪ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ತನ್ನೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಸೀಮಾ ದಾಸ್ ಎಂಬ ಮಹಿಳೆಯ ಪುತ್ರ ಸೋಹಮ್ ದಾಸ್ನನ್ನು ಹತ್ಯೆಗೈದು, ಸೀಮಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕೋಣೆಯಲ್ಲಿ ಕೂಡಿಹಾಕಿ ಪರಾರಿಯಾಗಿದ್ದ ಸುದೀಪ್, ಇದೀಗ ಪೊಲೀಸರ ವಿಚಾರಣೆ ವೇಳೆ ಕೊಲೆಯ ಹಿಂದಿನ ಅಸಲಿ ಕಾರಣಗಳನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಸುದೀಪ್ ಕಳೆದ ಹಲವು ವರ್ಷಗಳಿಂದ ಸೀಮಾ ದಾಸ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ. ಸೀಮಾ ಜೊತೆಗಿನ ಸಂಬಂಧದ ವಿಚಾರ ತಿಳಿದು ಸುದೀಪ್‌ನ ಪತ್ನಿ ಆತನಿಂದ ದೂರವಾಗಿದ್ದರು. ಪತ್ನಿಯನ್ನು ಬಿಟ್ಟು ಬಂದಿದ್ದ ಸುದೀಪ್, ಕಳೆದ ಎರಡು ವರ್ಷಗಳಿಂದ ಬನಶಂಕರಿಯ ಮನೆಯಲ್ಲಿ ಸೀಮಾ ದಾಸ್ ಹಾಗೂ ಆಕೆಯ ಪುತ್ರ ಸೋಹಮ್ ಜೊತೆ ವಾಸವಾಗಿದ್ದ. ಸೀಮಾ ಅವರ ಮನೆ ನಡೆಸುವುದಕ್ಕೆ ಹಾಗೂ ಪುತ್ರ ಸೋಹಮ್ ವಿದ್ಯಾಭ್ಯಾಸಕ್ಕೂ ಸುದೀಪ್ ಆರ್ಥಿಕವಾಗಿ ನೆರವು ನೀಡುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಸೀಮಾ ದಾಸ್‌ಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ಸುದೀಪ್‌ಗೆ ಶುರುವಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸೀಮಾ ಸರಿಯಾಗಿ ಉತ್ತರಿಸದೆ ದೂರವಿಡಲು (Avoid) ಆರಂಭಿಸಿದ್ದರು. “ತನ್ನನ್ನು ಬಳಸಿಕೊಂಡು, ಈಗ ಬರಿಗೈ ಆದಾಗ ಮೂರನೇ ವ್ಯಕ್ತಿಯ ಹಿಂದೆ ಹೋಗಿದ್ದಾಳೆ” ಎಂಬ ಆಕ್ರೋಶದಿಂದ ಸುದೀಪ್ ಕಳೆದ ಆರು ತಿಂಗಳಿಂದ ಆಗಾಗ ಮನೆಗೆ ಬಂದು ಜಗಳವಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.


