ಬೆಂಗಳೂರು ವಿಮಾನ ನಿಲ್ದಾಣದ ಲಗೇಜ್ ಟ್ರಾಲಿ ಗಾಲಿಯಲ್ಲಿ ಚಿನ್ನ ಸಾಗಣೆ, ₹1.79 ಕೋಟಿ ಮೌಲ್ಯದ ಚಿನ್ನ ಜಪ್ತಿ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಲಗೇಜ್ ಟ್ರಾಲಿಯ ಗಾಲಿಯಲ್ಲಿ ಚಿನ್ನ ಅಡಗಿಸಿ ಸಾಗಿಸಲು ಯತ್ನಿಸಿದ ಪ್ರಕರಣವನ್ನು ಭೇದಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ₹1.79 ಕೋಟಿ ಮೌಲ್ಯದ 1.200 ಕೆ.ಜಿ ವಿದೇಶಿಯ ಚಿನ್ನವನ್ನು ಜಪ್ತಿ ಮಾಡಿದೆ. ಮಲೇಷ್ಯಾ ಕೌಲಾಲಂಪುರದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿತ್ತು. ಈ ವೇಳೆ ಅವರು ಚಿನ್ನವಿದ್ದ ಪ್ಯಾಕೆಟ್‌ಗಳನ್ನು ಲಗೇಜ್ ಟ್ರಾಲಿಗಳ ಕೆಳಭಾಗಕ್ಕೆ ಅಂಟಿಸಿ, ಅಲ್ಲಿಂದ ತೆರಳಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ಎರಡು ಟ್ರಾಲಿಗಳ ಕೆಳಭಾಗದಲ್ಲಿ ಅಡಗಿಸಿಟ್ಟಿದ್ದ 12 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. 999.9 ಶುದ್ಧತೆಯ (24 ಕ್ಯಾರೆಟ್) ಚಿನ್ನದ ಒಟ್ಟು ತೂಕ 1,200.40 ಗ್ರಾಂ ಇದ್ದು, ಅದರ ಮೌಲ್ಯ ₹1,78,88,360 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeCustomsGoldSeizure


